ಎಲೆಕ್ಟ್ರೊಕಾರ್ಟಿಕೋಗ್ರಾಂ: ತಲೆಯ ನೆತ್ತಿವಲಯದ ಎರಡು ಬಿಂದುಗಳ ವಿದ್ಯುದ್ವಿಭವಗಳಲ್ಲಿ ಕಾಲಕಾಲಕ್ಕೆ ಉಂಟಾಗುವ ಬದಲಾವಣೆಗಳನ್ನು ಚಿತ್ರಿಸುವ ಗ್ರಾಫ್ ಇಇಜಿ; ಮಿದುಳಿನ ಮೇಲೆಯೇ ಎಲೆಕ್ಟ್ರೋಡುಗಳನ್ನು ಇಟ್ಟು ತರಂಗಗಳನ್ನು ದಾಖಲಿಸಿದಾಗ ದೊರೆಯುವ ಗ್ರಾಫಿನ ಹೆಸರು ಎಲೆಕ್ಟ್ರೊಕಾರ್ಟಿಕೋಗ್ರಾಂ. ಮಿದುಳಿನ ಶಸ್ತ್ರಚಿಕಿತ್ಸೆಯ ಸಂದರ್ಭಗಳಲ್ಲಿ ಮಾತ್ರ ಇದು ಸಾಧ್ಯ. ಮಿದುಳಿನ ವಿದ್ಯುತ್ಕ್ರಿಯೆ ಅತಿಸೂಕ್ಷ್ಮ ವೋಲ್ಟೇಜಿನದು (0,00001__0.0002 ವೋಲ್ಟ್‌). ಅದರ ಆವರ್ತ ಸಂಖ್ಯೆ ಕಡಿಮೆ, ಸೆಕೆಂಡಿಗೆ 1__100.
ಕೇಟನ್ ಎಂಬಾತ ಪ್ರಾಣಿಮಿದುಳಿನ ವಿದ್ಯುದ್ವಿಭವಗಳನ್ನು 1875 ರಲ್ಲಿಯೇ ಪ್ರಾಯೋಗಿಕವಾಗಿ ಪ್ರದರ್ಶಿಸಿದರೂ ಮನುಷ್ಯನ ಮಿದುಳಿನ ವಿದ್ಯುತ್ಕ್ರಿಯೆಯ ಪ್ರದರ್ಶನ ನಡೆದದ್ದು ಈಚೆಗೆ (1929), ಬರ್ಗರ್ ಎಂಬಾತನಿಂದ, ಆಡ್ರಿಯನ್ ಮತ್ತು ಮ್ಯಾಥ್ಯೂಸ್ ಇದನ್ನು  ಸ್ಥಿರೀಕರಿಸಿದರು (1924). ಅಪಸ್ಮಾರವನ್ನು ಕುರಿತ ತಮ್ಮ ವರದಿಗಳನ್ನು ಗಿಬ್ಸ್‌, ಡೇರಿನ್ ಮತ್ತು ಲೆನಾಕ್ಸ್‌ 1935ರಲ್ಲೂ ಜ್ಯಾಸ್ಟರ್ ಒಂದು ವರ್ಷದ ತರುವಾಯವೂ ಪ್ರಸಿದ್ಧಿಸಿದರು, ತಲೆಬುರುಡೆಯೊಳಗೆ ಗೆಡ್ಡೆಗಳಿರುವಾಗ ಇಇಜಿಯಲ್ಲಿ ಆಗುವ ವ್ಯತ್ಯಾಸಗಳನ್ನು ಫೋರೆಸ್ಟರ್ ಮತ್ತು ಆಲ್ಟೆನ್ ಬರ್ಗರ್ 1935ರಲ್ಲಿ ಪ್ರದರ್ಶಿಸಿದರು. 1938ರಿಂದೀಚೆಗೆ ದ್ವಿತೀಯ ಜಾಗತಿಕ ಸಮರದ ಚಿಕಿತ್ಸಕ ಸಮಸ್ಯೆಗಳ (ಕ್ಲಿನಿಕಲ್ ಪ್ರಾಬ್ಲೆಮ್ಸ್‌) ಪರೀಶೀಲನೆ ಯಿಂದಲೂ ಕೇಸ್, ಬ್ಯೂಸಿ, ಹಿಲ್ ಮತ್ತು ಪಾರ್ ಅದರಲ್ಲೂ ವಿಶೇಷವಾಗಿ ಬಾಗ್ಜಿ ಇವರ ಸಂಶೋಧನಾತ್ಮಕ ಲೇಖನಗಳಿಂದಲೂ ಇಇಜಿಯ ಉಪಯೋಗ ಕ್ರಮೇಣ ವೃದ್ಧಿಗೊಂಡಿದೆ. ಭಾರತದ ಬಸು.ಕೆ.ಬಾಗ್ಜಿಯವರು ಇತ್ತೀಚಿನವರೆಗೆ ಮಿಶಿಗನ್ ವಿಶ್ವವಿದ್ಯಾನಿಲಯದಲ್ಲಿ ಇಇಜಿ ಪ್ರಾಧ್ಯಾಪಕರಾಗಿದ್ದರು. ಈ ಕ್ಷೇತ್ರದಲ್ಲಿ ಅವರ ಕೊಡುಗೆ ಅಪಾರವಾದದ್ದು.

ವಿಧಾನ: ಹೆಚ್ಚಿನ ಸಂಸ್ಥೆಗಳಲ್ಲಿ ಬಹುದಿಕ್ಕಿನ ಬಹುನಾಲೆಯ ಇಇಜಿಗಳನ್ನು ಮಿದುಳಿನ ವಿದ್ಯುತ್ಕ್ರಿಯೆಗಳನ್ನು ದಾಖಲಿಸಲು ಉಪಯೋಗಿಸುತ್ತಾರೆ. ಲೋಹಬಿಲ್ಲೆಗಳಿಂದ ಅಥವಾ ಬೆಳ್ಳಿಯ ಕ್ಲೋರೈಡಿನ ಮೇಲೆ ತೇವಪುರಿತ ಮೆತ್ತೆಗಳಿಂದ ಮಾಡಿದ ಎಲೆಕ್ಟ್ರೋಡುಗಳನ್ನು ತಲೆಯ ವಿವಿಧ ಭಾಗಗಳಲ್ಲಿ ಇಡಲಾಗುವುದು. ತರುವಾಯ ಯಾವುದೇ ಎರಡು ಎಲೆಕ್ಟ್ರೋಡುಗಳ ವಿದ್ಯುದ್ವಿಭವಗಳಲ್ಲಿ ಕಾಲಕಾಲಕ್ಕೆ ಉಂಟಾಗುವ ಬದಲಾವಣೆಗಳನ್ನು ಗ್ರಾಫ್ ವಿಧಾನದಿಂದ ಚಿತ್ರಿಸುತ್ತಾರೆ. 

ಮಿದುಳಿನ ವಿಭವಗಳ ಸ್ವಭಾವ: ಮಿದುಳಿನ ಅನೈಚ್ಛಿಕ ಕ್ರಿಯೆಗಳ ಸ್ವಭಾವ ವಿವರವಾಗಿ ಇನ್ನೂ ತಿಳಿದಿಲ್ಲ. ಬಿಡಿ ನ್ಯೂರಾನುಗಳಲ್ಲಿ ಒಂದೊಂದರ ವಿದ್ಯುದ್ವಿಸರ್ಜನೆಗಳ ಆಕಾಶೀಯ (ಸ್ಪೇಶಿಯಲ್) ಹಾಗೂ ಕಾಲೀಯ (ಟಿಂಪೊರಲ್) ಮೊತ್ತಗಳ ಪರಿಣಾಮವಾದ ಘಟನೆಯೇ ಮಿದುಳಿನ ಅನೈಚ್ಛಿಕ ಪರ್ಯಾಯ ವಿಭವಸೂಚಕ ತರಂಗಗಳೆಂದು ಪರಿಗಣಿಸಲಾಗಿದೆ. ಇಂದು ಚಿಕಿತ್ಸಾವಿಧಾನದಲ್ಲಿ ಉಪಯೋಗಿಸುತ್ತಿರುವ ಇಇಜಿ ಪ್ರಾಯಶಃ ಬಹುಸಂಖ್ಯೆಯ ಕಾರ್ಟಿಕಲ್ ನ್ಯೂರಾನುಗಳ ಸಂಗ್ರಹಣೆಯಿಂದ ದಾಖಲಿಸುವುದು. ಭಿನ್ನ ಆವರ್ತಸಂಖ್ಯೆಗಳಲ್ಲಿರುವ (ಫ್ರೀಕ್ವೆನ್ಸೀಸ್) ಅನಿರ್ದಿಷ್ಟ ಸಂಖ್ಯೆಯ ಮತ್ತು ಅನಿರ್ದಿಷ್ಟ ಗುಂಪುಗಳ ಕ್ರಿಯೆಯನ್ನು ಇಂಥ ದಾಖಲೆ ಸೂಚಿಸುತ್ತದೆ. ಕೆಲವೊಂದು ಗುಂಪುಗಳು ಕ್ರಿಯೆಗಳ ಸಮಗ್ರ ಮೊತ್ತವೆ ಈ ದಾಖಲೆ. ಇಇಜಿ ವ್ಯಕ್ತಪಡಿಸುವ ಕ್ರಿಯೆಗಳ ವ್ಯಾಪ್ತಿ ಬಲು ವಿಶಾಲವಾಗಿದೆ-ಅದು ಸೆಕೆಂಡಿಗೆ 1_50 ಅಥವಾ 100 ಅಥವಾ ಹೆಚ್ಚೂ ಇರಬಹುದು. ಆವರ್ತಸಂಖ್ಯೆಯನ್ನು ಈ ಕೆಳಗಿನಂತೆ ವಿಭಾಗಿಸಿದೆ.
	ಆಲ್ಪಾ	(ಚಿ)	8-13 ಸೆಕೆಂಡಿಗೆ
	ಬೀಟ	(b)	15-50 ಸೆಕೆಂಡಿಗೆ
	ಥೀಟ	(q)	4-7 ಸೆಕೆಂಡಿಗೆ
	ಡೆಲ್ಟ	(ಜ)	1-3 ಸೆಕೆಂಡಿಗೆ
ಆವರ್ತಸಂಖ್ಯೆ-ವೋಲ್ಟೇಜ್ ಸಂಬಂಧಾನುಸಾರ ಇಇಜಿಯನ್ನು ವರ್ಗೀಕರಿಸಲಾಗಿದೆ. ವೋಲ್ಟೇಜ್ ಮತ್ತು ರೂಪಿಕೆ (ಪ್ಯಾಟರ್ನ್) ಮುಖ್ಯವಾದವಾದರೂ ಆವರ್ತಸಂಖ್ಯೆಯೇ ಪ್ರಧಾನ ಪ್ರಾಚಲ (ಪ್ರಿನ್ಸಿಪಲ್ ಪ್ಯಾರಾಮೀಟರ್). 

ಸಹಜ (ನಾರ್ಮಲ್) ಇಇಜಿ: ಜಿಬ್ಸ್‌ ಎಂಬಾತ ಸಹಸಸ್ಥಿತಿಯ 1000 ತರುಣರ ದಾಖಲೆ ಚಿತ್ರಿಸಿದ. ಅವನ ತೀರ್ಮಾನಗಳು ಈ ಕೆಳಗಿನಂತಿವೆ: ಶೇ.75 ಸಹಜ ಜನರಲ್ಲಿ 8.5-12/ಸೆಕೆಂಡ್ ವ್ಯಾಪ್ತಿಯಲ್ಲಿ ಆಲ್ಪಕ್ರಿಯೆಯಿತ್ತು; ಮತ್ತು ಶೇ.11 ಜನರಲ್ಲಿ ಅತಿವೇಗದ ನಿಮ್ನ(ಲೋ) ವೋಲ್ಟೇಜ್ ರೂಪಿಕೆ ಇತ್ತು. ಇವೆರಡನ್ನೂ ಸಹಜ ರೂಪಿಕೆಗಳೆಂದು ಸ್ವೀಕರಿಸಲಾಯಿತು. ಉಳಿದ ಶೇ.14 ಈ ಸ್ಥಿತಿಗಿಂತ ವಿಚಲಿತರಾಗಿದ್ದರೂ ಅ ವ್ಯಕ್ತಿಗಳು ಯಾರೂ ಯಾವ ನರವ್ಯಾಧಿಯಿಂದಲೂ ನರಳುತ್ತಿದ್ದಂತೆ ತೋರಲಿಲ್ಲ.
ಮಕ್ಕಳ ದಾಖಲೆಗಳು ವಯಸ್ಕರವುಗಳಿಗಿಂತ ಭಿನ್ನವಾಗಿವೆ. ಅವರಲ್ಲಿ ತರಂಗಗಳು ಸಾಮಾನ್ಯವಾಗಿ ನಿಧಾನ; ಮಗು ಬೆಳೆಯುತ್ತಿದ್ದಂತೆ ಇವು ಬದಲಾಗಿ ಅದು ಯುವಕನಾಗುವ ವೇಳೆಗೆ ಸಹಜ ರೂಪಿಕೆಗಳಾಗುತ್ತವೆ.

ಅನ್ವಯಗಳು: ಬುರುಡೆಯೊಳಗಿನ ಗೆಡ್ಡೆಗಳು ಮತ್ತು (ಇಂಟ್ರಾಕ್ರ್ಯಾನಿಯಲ್ ನಿಯೋಪ್ಲಾಸಮ್ಸ್‌) ಮಿದುಳಿನ ಗೆಡ್ಡೆಗಳ__ ಅದರಲ್ಲೂ ಪ್ರಧಾನ ಮಿದುಳಿನ ಭಾಗಗಳಲ್ಲಿ (ಸೆರೆಬ್ರಲ್ ಹೆಮಿಸ್ಫಿಯರ್) ತಲೆದೋರುವವುಗಳ __ ಸಮೀಪದಲ್ಲಿ ಮಂದ ವಿದ್ಯುತ್ಕ್ರಿಯೆ ಇರುವುದನ್ನು ತೋರಿಸಬಹುದು; ಶೇ.75 ಅನ್ವೇಷಣೆಗಳಲ್ಲಿ ಗೆಡ್ಡೆಗಳ ಸ್ಥಾನ ನಿರ್ಧರಣ ನಿಖರವಾಗಿತ್ತು. ಆದ್ದರಿಂದ ಮಿದುಳ ಗೆಡ್ಡೆ ಇರುವಂಥ ಒಬ್ಬ ವ್ಯಕ್ತಿಯ ಇಇಜಿ ಸಹಜರೂಪಿಕೆಯನ್ನೇ ತೋರಿಸಬಹುದು; ಎಂದಮಾತ್ರಕ್ಕೆ ಆತನಿಗೆ ಗೆಡ್ಡೆ ಇಲ್ಲವೇ ಇಲ್ಲ ಎಂದು ತೀರ್ಮಾನಿಸಲು ಈ ಪರೀಕ್ಷೆಯನ್ನು ಆಧರಿಸುವುದು ಸಾಧುವಲ್ಲ. ಚಿಕಿತ್ಸಕ ಮುಂತಾದ ಇತರ ಪುರಾವೆಗಳೊಡನೆ ಹೋಲಿಸಿ ಯುಕ್ತ ತೀರ್ಮಾನಕ್ಕೆ ಬರಲು ಇದೊಂದು ಉಪಯುಕ್ತ ವಿಧಾನವೆಂದು ಪರಿಗಣಿಸಬೇಕಷ್ಟೆ.	(ಎಂ.ಪಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ